
ಇಲ್ಲ.. ಇರಲಿಕ್ಕಿಲ್ಲ.. ನೀನು ನಕ್ಕಿದ್ದು ನನಗೇಯೇನು? ಉಹುಮ್ ಸಾಧ್ಯವಿಲ್ಲ. ಎಲ್ಲಾ ನನ್ನ ಭ್ರಮೆಯಷ್ಟೆ.. ಎಷ್ಟೋ ದಿನಗಳಿಂದ ಹೀಗೆ ಅನಿಸಿದ್ದಿದೆ. ನೀನು ನನ್ನೇ ನೊಡುತ್ತಿದ್ದರೂ ನನ್ನ ಸುಂದರ ಕನಸು ನಿಜವೆಂದು ತಿಳಿಯಲು ಮನಸ್ಸು ಒಪ್ಪುತ್ತಿಲ್ಲ.. ಹುಚ್ಚುಕೋಡಿ ಮನಸು..
ದಿನಾ ಕಾಲೇಜಿನಿಂದ ಮನೆಗೆ ವಾಪಸ್ಸಾಗುತ್ತಿರಲು ಒಮ್ಮೆ ನಿನ್ನ ನೋಡಿದರೆ ಸಾಕು ಎಂದು ಕಾತರಿಸುತ್ತಿರುತ್ತದೆ ಮನ.. ಆದರೆ ನೀನು ಮುಂದಿನಿಂದ ಬರುತ್ತಿದ್ದಿಯೇ ಎಂದು ಗೊತ್ತಾಗುತ್ತಿದಂತೆ ತಲೆ ಎತ್ತಿ ನೊಡಲು ಧೈರ್ಯವೇ ಆಗುವುದಿಲ್ಲ..
ನಾವು ಹೊರಬರಲೆಂದೆ ಕಾಯುತ್ತಿರುವಂತೆ ಸುರಿವ ಸಂಜೆ ಮಳೆಯಲ್ಲಿ ನಡಿಯುತ್ತಾ, ಬೀಸೊ ತಂಗಾಳಿಗೆ ಸಣ್ಣಗೆ ನಡುಗುತ್ತಿರಲು.. ನಿನ್ನ ನೋಡಿದಂತೆ ಕಾಲುಗಳ ನಡುಕ ಹೆಚ್ಚಲು ಎದೆಯೊಳಗೇನೊ ಬೆಚ್ಚಗಿನ ಅಲೆ..
ನಿನ್ನ ಗೆಳೆಯರ ಗುಂಪಿನೊಂದಿಗೆ bat ball wicket ಗಳ ಸದ್ದುಮಾಡುತ್ತಾ.. ನಗುತ್ತಾ.. ನೆನೆಯುತ್ತಾ.. ಆಡಲು ಹೊರಟಿರುವುದನ್ನ ನೋಡಿ ಈ ಮಳೆಯಲ್ಲೂ ಇದೆಂತಾ ಹುಚ್ಚು ಎಂದು ಅನಿಸಿದ್ದಿದೆ.. ಆದರೇನು.. ದಿನಾ ನಿನ್ನ ನೋಡುವುದೆ ಒಂದು ಹಬ್ಬ.. ಆ ದಿನ ಎಡೆಬಿಡದೆ ಜೋರಾಗಿ ಮಳೆ ಸುರಿದಂದು ನೀನಾಗಲಿ ನಿನ್ನ ಗುಂಪಾಗಲಿ ಕಾಣದಿದ್ದಾಗ ನನ್ನ ಪ್ರೀತಿಯ ಮಳೆಗೆ ಎಷ್ಟೊಂದು ಬೈದ್ದಿದ್ದೆ ಗೊತ್ತ.
ಹನಿ ಹನಿ ಮಳೆಯಲಿ ನೆನೆಯುತ್ತಿರಲು ನೀನು, ನಿನ್ನ ಅಂಗಿಯ ಮೇಲೆ ಅದು ಬಿಡಿಸಿದ ಚಿತ್ತಾರ.. ಅಲ್ಪ ಸ್ವಲ್ಪ ಒದ್ದೆಯಾಗಿ ನಿನ್ನ ಹಣೆಮೇಲೆ ಜಾರಿ ಬಿದ್ದು ಕುಳಿತಿರೊ ನಿನ್ನ ಕೂದಲು, ಬೆರಳುಗಳಿಂದ ಅವನ್ನ ಹಾಗೆ ಹಿಂದಕ್ಕೆ ಬಗ್ಗಿಸೊ ನಿನ್ನ ಪರಿ , ಛತ್ರಿಯ ಅಂಚಿನಿಂದ ಕದ್ದು ಕದ್ದು ನೋಡಿರೊ ನನ್ನ ಕಂಗಳಲ್ಲಿ ಅಚ್ಚೊತ್ತಿದಂತಾಗಿದೆ.
ನಿನ್ನೆ ಸಂಜೆ ಬೀಸುತ್ತಿದ್ದ ಗಾಳಿಯ ರಭಸಕ್ಕೆ ನನ್ನ ಗೆಳತಿಯ ಛತ್ರಿ ಮೇಲ್ಮುಖವಾಗಲು, ಎಲ್ಲಿ ನಾನು ನಿನ್ನ ಕದ್ದು ನೋಡೊ ಗುಟ್ಟು ರಟ್ಟಾಗುತ್ತೊ ಅಂತ ಹೆದರಿ ಛತ್ರಿನ ಗಟ್ಟಿಯಾಗಿ ಹಿಡಿದಿದ್ದರೂ ಗಾಳಿಯು ನನ್ನ ಛತ್ರಿಯ ಮೇಲೆತ್ತಲು ನೀ ನೋಡಿದ ಆ ನೋಟ.. ನಿನ್ನ ಗುಟ್ಟು ನನಗೆ ಗೊತ್ತು ಎಂದು ಹೇಳಿದಂತಾಯಿತಲ್ಲಾ.
ಗೆಳೆಯರ ಯಾವುದೊ ಹಾಸ್ಯಕ್ಕೆ ನಗುತ್ತಾ, ಅ ನಗು ತುಟಿಗಳಿಂದ ಮಾಸೊ ಮೊದಲೆ ನಿನ್ನ ನೋಟ ನನ್ನ ನೋಟದೊಡನೆ ಬೆರೆತಾಗ ಸುತ್ತ ಮುತ್ತಲಿನ ಪರಿಸರವೆ ಒಮ್ಮೆ ಸ್ತಬ್ಧವಾದಂತಾಗುತ್ತಿತ್ತು.. ಆ ಕ್ಷಣದಲ್ಲಿ ನಿನಗಿಂತ ಸುಂದರ ಈ ಜಗತ್ತಿನಲ್ಲೇ ಯಾರಿಲ್ಲ ಎಂದೆನಿಸುತ್ತಿತ್ತು.. ಆ ನಗು ನನಗಾಗಿರಬಾರದಿತ್ತೆ ಎಂದು ಮನ ಎಷ್ಟು ಹಪತಪಿಸುತ್ತಿತ್ತು..
ಆದರೆ ಇಂದು ನೀನು ನನ್ನೆಡೆಗೆ ನೋಡಿ ಮುಗುಳು ನಕ್ಕೆಯಲ್ಲ.. ಅದು ನನಗೆ ಹೌದು ತಾನೆ? ಅ ನಿನ್ನ ನಗೆ ಮಲ್ಲಿಗೆಯ ಮುಡಿಯಲೆ ನಾನು?
