Monday, May 7, 2012

ಅವನು.... ಅವಳು....




"ಈ ನದೀಪಕ್ಕದ ಇದೇ ಕಲ್ಲಿನಲ್ಲಿ ಕುಳಿತು ತಾನೆ ಹುಡುಗಿ, ಅಂದು ನಾವು ಕನಸ ಕಂಡಿದ್ದು.. ಯಾವಾಗ ನಮ್ಮಿಬ್ಬರ ನಡುವೆ ಪ್ರೀತಿ ಶುರುವಾಯಿತೊ ಗೊತ್ತಿಲ್ಲ.. ಅದು ಯಾವಾಗ ಖಾಲಿಯಾಯಿತೊ ಗೊತ್ತಿಲ್ಲಾ.

ನಿನ್ನಲ್ಲಿ ನಾನೆ ಹೇಳಿದಂತೆ ನೀನು ನನ್ನ ಮೊದಲ ಪ್ರೀತಿಯಲ್ಲ.. ಒಮ್ಮೆ ಪ್ರೀತಿಯಲ್ಲಿ ಸೋತವನು ನಾನು. ಪ್ರೀತಿಯೆಂಬ ಭಾವನೆಯ ಅರ್ಥ ತಿಳಿಯುವ ಮುನ್ನವೆ ಅವಳನ್ನು ಪ್ರೀತಿಸಿದ್ದೆ, ಲೋಕ ಅರಿವಾಗೊ ವಯಸ್ಸಿಗಿಂತ ಮುಂಚೆನೆ ಅವಳ ಕಣ್ಣಲ್ಲಿ ಲೋಕ ಕಂಡೆ.. ಅವಳನ್ನು ನೊಡುವುದು ಧ್ಯಾನವಾಗಿತ್ತು.. ಸದಾ ಮೌನಿಯಾಗಿರುತ್ತಿದ್ದ ನಾನು ನನ್ನ ಮೌನದಲ್ಲಿರೊ ಮಾತು ಅವಳು ಕೇಳಿಸಿಕೊಂಡಾಗ ಇನ್ನು ಶುರುವಾಗಬೇಕಿರೋ ಬದುಕಿನ ಸೊಗಸ ಕಂಡಿದ್ದೆ.  

ನಾ ಬೆಳೆದಂತೆ ಅವಳ  ಪ್ರೀತಿಸೊದು ಉಸಿರಾಗಿತ್ತು, ಅವಳಿಂದ ದೂರವಿದ್ದರೂ ನಮ್ಮ ನಡುವಿದ್ದ ಪ್ರೀತಿಯ ಬಗ್ಗೆ ನಂಬಿಕೆ ಇತ್ತು.  ಓದು ಮುಗಿಸಿ ಹಿಂತಿರುಗಿದ ನನಗೆ ಅವಳ ಮದುವೆಯ ಬಗ್ಗೆ ತಿಳಿದಾಗ ಬದುಕೆ ಶೂನ್ಯವಾಗಿತ್ತು. ನಾನು ಬಡವನೆಂದು ವಿಧಿಯು ತಿರಸ್ಕರಿಸಿತ್ತು.

ಮುಂದೆಂದು ಯಾರನ್ನು ಪ್ರೀತಿಸೊಲ್ಲ ಎಂಬ ನನ್ನ ನಿರ್ಧಾರ ನಿನ್ನಿಂದ ಸಡಿಲವಾಯಿತು. ಯಾಕೆ ಹೇಗೆ ನಂಗೊತ್ತಿಲ್ಲ.. ವರುಷಗಳು ಕಳೆದಂತೆ ಪ್ರೀತಿ ಬತ್ತಿತೇ.. ಇಲ್ಲ ನಾನಿನ್ನ ಪ್ರೀತಿಸೆ ಇರಲ್ಲಿಲ್ಲವೆ.. ಗೊತ್ತಿಲ್ಲ ಕಣೆ.

ಈ ಒಂದು ವಿಷಯದಲ್ಲಿ ಮನಸಲ್ಲಿ ಕುಣಿಯೊ ಪದ ಒಂದೇ 'ಗೊತ್ತಿಲ್ಲ'. ನಿನ್ನ ಜೊತೆ ಇರಬೇಕು ದಿನವಿಡಿ ನಿನ್ನ ನಗು ಕೇಳಬೆಕು, ಸದಾ ನಿನ್ನ ನಗು ನೊಡುತ್ತಾ ಇರಬೇಕೆಂದು ತುಡಿಯುತ್ತಿದ್ದ ಮನಕ್ಕೆ ಆ ನಗುವಿನ ಮೋಹ ಕಡಿಮೆಯಾದದ್ದು ಹೇಗೆ?

ನಿನ್ನ ಬೆರಳುಗಳಲ್ಲಿ ನನ್ನ ಬೆರಳ ಬೆಸೆದು ಸೂರ್ಯೊದಯ ನೊಡುತ್ತಿದ್ದ ಆ ದಿನಗಳಲ್ಲಿ, ಬದುಕಿನ ಎಲ್ಲ ಮುಂಜಾನೆಗಳನ್ನು ಹೀಗೆ ಕಳೆಯಬಲ್ಲೆ ಎಂದನಿಸಿದ್ದು ಸುಳ್ಳೆ?

ನಮ್ಮ ದಾರಿ ಒಂದಾಗಲು ಸಾಧ್ಯವಿಲ್ಲ ಎಂಬ ಸತ್ಯ ಅರಿವಾದದು ನಿಜವೆ ಇಲ್ಲ ಪ್ರೀತಿಯ ದಾರಿಯಿಂದ ಹಿಂದೆ ಸರಿದ ನನ್ನ ರೀತಿಗೆ ನಾ ನೀಡಿದ ಸಮರ್ಥನೆಯೆ?

ಹುಡುಗಿ, ಇಂದೇಕೆ ಹೀಗೆ ಇಷ್ಟೊಂದು ಪ್ರಶ್ನೆಗಳು ಕಾಡುತ್ತಿವೆ.. ಒಂದು ತಿಂಗಳ ಹಿಂದೆ ನಿನ್ನ ಕಂಡಾಗ ಎರಡು ವರುಷಗಳ ಹಿಂದೆ ನೀನು ದೂರವಾದ ದಿನ ನೆನಪಾಗಿದ್ದು ನಿಜ ಆದರೆ ಮತ್ತೆ ನಾನು ನನ್ನ ಲೊಕದಲ್ಲಿ ಸೇರಿದ್ದೆ.

ಹೌದು ನನ್ನ ಲೋಕ.. ನೀನಿಲ್ಲದ ನನ್ನ ಲೋಕ... ಅಷ್ಟು ವರುಶಗಳ ನಮ್ಮ ಒಡನಾಟದಲ್ಲಿ ನೀನು ನನ್ನ ಲೋಕ ಪ್ರವೆಶಿಸೇ ಇಲ್ಲ.  ಅಲ್ಲ ಪ್ರವೇಶ ನಾ ಕೊಟ್ಟಿರಲ್ಲಿಲ್ಲವೆ? ಪ್ರೀತಿಯಿಂದ ನಾನು ಹಿಂದೆ ಸರಿದೆನೆಂದು ನಿನಗನಿಸಿತ್ತು ಅಲ್ವೆ..? ಅದರೆ ಇಬ್ಬರ ದಾರಿ ಒಂದಾಗಲು ಬರಿ ಪ್ರೀತಿ ಸಾಕಾಗಲ್ಲ ಎಂಬ ಸತ್ಯ ನನಗರಿವಾಗಿತ್ತು ಕಣೆ.. ಮಲ್ಲಿಗೆಯಂತೆ ಬೆಳೆದ ನಿನಗೆ ನನ್ನ ಜೀವನ ಶೈಲಿ ಸರಿಹೋಗಲ್ಲ.. ಇದು ನನ್ನ ಯೊಚನೆಯಾಗಿತ್ತು ಅಂದು.

ಆದರೆ ಇಂದು ಏಕೀ ಕೊಲಾಹಲ.. ಹಿಂದೊಮ್ಮೆ ವಿಧಿ ಕೊಟ್ಟ ಏಟು ಇನ್ನೊಮ್ಮೆ ಎದುರಿಸಲಾರೆನೆಂಬ ಅಧರ್ಯದಿಂದ ಹಾಗೆ ಮಾಡಿದೆನೆಂದು ಮನಸೇಕೆ ಅಣಕಿಸುತ್ತಿದೆ? ನಿನ್ನ ಬಿಟ್ಟು ನನ್ನ ದಾರಿ ಕವಲಾಗಿಸಿ ಮುನ್ನಡೆದಿದ್ದೆ,ಇಂದು ನನ್ನ ಲೊಕವಾಗಿರುವ ನನ್ನ ಜೀವನಸಂಗಾತಿಯ ಜೊತೆ; ನೀನೂ ಮುನ್ನಡೆಯ ಬಹುದೆಂದು ತಿಳಿಯುತ್ತಾ. ಆಂದು ಕೊನೆಯ ಬೇಟಿಗೆಂದು ನೀನು ನಮ್ಮೆನೆಗೆ ಬಂದಾಗ ತಿಳಿಸಿದ ನಿನ್ನ ಮದುವೆಯ ಸಮಾಚಾರ ನನ್ನ ನಂಬಿಕೆ ದೃಡವಾಗಿಸಿತ್ತು..

ಆದರೆ  ನಿನ್ನ ಪ್ರೀತಿಯ ಆಳ ತಿಳಿಯದಾದೆನೆ? ಇಂದು ನಾನು ಕೇಳಿದ್ದು ನಿಜವೆ.. ನೀನು ಅಂದು ಹೇಳಿದ್ದು ಸುಳ್ಳೆಂದು. ನೀನು ಇಂದಿಗೂ ಒಂಟಿಯೆಂದು… "



*****


"ಯಾವತ್ತು ನೋಡದ ಗೊಂದಲ ನಿನ್ನ ಕಣ್ಣುಗಳಲ್ಲಿ ಇಂದೇಕೆ.... ನೀನಿಂದು ಒಂದು ಸಂತೃಪ್ತ ಬಾಳು ಬಾಳುತ್ತಿರಬೇಕಾದರೆ ನನಗೆಷ್ಟು ಸಂತೊಷ ಗೊತ್ತಾ? ಅಂದು ನನ್ನ ಪ್ರೇಮ ತಿರಸ್ಕರಿಸಿ ಮುಂದಡಿ ಇಟ್ಟಾಗ ನೀನಂದಿದ್ದೆ ನೀನೊಂದು ಅತೃಪ್ತ ಆತ್ಮ ಎಂದು.. ನನ್ನನ್ನು ಮಧ್ಯ ದಾರಿಯಲಿ ಬಿಡಲು ಪರಿಸ್ಥಿತಿಯ ಕಾರಣ ಹೇಳಿ ಆ ಮಾತನು ಹೇಳಿದ್ದೆ ನೆನಪಿದೆಯ.. ಆದರೆ ಅತೃಪ್ತ ಆತ್ಮವಾಗಿರುವುದು ನಾನು ನಿನ್ನ ಪ್ರೀತಿ ಸಿಗದೆ. ವರುಷಗಳ ಪ್ರೀತಿ ಮರೆತು ಸುಖವಾಗಿರುವೆ ನೀನು.. ನನ್ನಿಂದ ಅದು ಸಾಧ್ಯವಿಲ್ಲದಾಯಿತು. 

ಆ ದಿನ ಆ ಮದುವೆಯಲ್ಲಿ ನಿನ್ನ ನೋಡಿದ ಮೊದಲನೆ ಬಾರಿಗೆ ನಿನ್ನಲೇನೋ ಸೆಳೆತ ಕಂಡಿದ್ದೆ. ಆದರೆ ಹೃದಯದ ಮಾತು ಮನಸಿಗರಿವಾಗಿರಲಿಲ್ಲ. ನಿನ್ನ ಗಂಭೀರ ಮಾತು ಕತೆ, ಸಾವಿರ ಮಾತನಾಡುವ ಆ ಕಂಗಳು ಆಗಾಗ ನನ್ನ ಮನಸ್ಸಿಗೆ ನನ್ನ ಹೃದಯದ ಮಾತನ್ನು ರವಾನಿಸಲು ಪ್ರಚೊದಿಸುತ್ತಿತ್ತು. ಆದರೂ ದಡ್ಡ ಮನಸಿಗೆ ಅದು ಗೊಚರಿಸೆ ಇರಲಿಲ್ಲ. ಯಾವತ್ತೂ ನನ್ನ ಹೃದಯ ವೀಣೆ ಮಿಡಿಯುತಿರಲೆ ಇಲ್ಲವೇನೊ… ಆದರೆ ಅಂದೊಂದು ದಿನ ನೀನಾಗೆ ಆ ತಂತಿ ಮೀಟಿದೆ. ಮುಂದೊದು ದಿನ ತಂತಿಯ ನೀನಾಗೆ ಕಡಿವೆಯೆಂದು ತಿಳಿದಿದ್ದರೆ...

ನಿನ್ನ ನೆನಪು ನನ್ನ ಉಸಿರಲ್ಲೆ ಸೇರಿರುವಾಗ ಮರೆತು ಹೊಗಲಿ ಹೇಗೆ.. ನಮ್ಮ ಪ್ರೀತಿಯ ಮರೆಯಲಿ ಹೇಗೆ? ಅಲ್ಲ ಅದು ಬರಿ ನನ್ನ ಪ್ರೀತಿ ಮಾತ್ರವೆ? ನೀನು ಸಾವಿರ ಉತ್ತರಗಳನ್ನು ಕೊಟ್ಟಿದ್ದರೂ ನನ್ನ ಮನಸಿನಲ್ಲಿ ಇನ್ನೂ ಸಾವಿರ ಪ್ರಶ್ನೆಗಳು ಹಾಗೆ ಇವೆ. ನೀನಂದು ನಿನ್ನ ನಿರ್ಧಾರ ತಿಳಿಸಿದ ದಿನ ನಾನು ಹುಚ್ಚಿಯಾಗಿದೆ.. ಅತ್ತು ಕಾಡಿ ನಿನ್ನ ಬೇಡಿದ್ದೆ.. ನನ್ನ ಕಣ್ಣೀರು ನಿನಗರ್ಥವಾಗದಾಗ ಪ್ರೀತಿಯ ಮೇಲೆ ಸಂದೇಹ ಪಟ್ಟೆ. ನೀನು ಪ್ರೀತಿಸದ್ದಿದ್ದರೂ ಪರ್ವಾಗಿಲ್ಲ ನನ್ನ ಪ್ರೀತಿ ನಮ್ಮಿಬ್ಬರಿಗೆ ಸಾಕಗುತ್ತೆ ಎಂದು ನಿನ್ನಲ್ಲಿ ಹೆಳಿದ್ದೆನಲ್ಲಾ.. ಆಗಲು ನಿನ್ನ ಮನಸು ಕರಗಿರಲಿಲ್ಲ.. ವರುಶಗಳು ನೀನಾಡಿದ್ದ ಪ್ರೀತಿಯ ಮಾತುಗಳು ಸುಳ್ಳಾಗಿ ಕಂಡಿತ್ತಾಗ ನನಗೆ.

ನನ್ನ ಕಣ್ಣಲ್ಲಿ ನೀನೆಂದು ನೀರು ನೊಡಲಾರೆ ಎಂದೆಲ್ಲ ನೀನು ಹೇಳಿದಾಗ ಯಾರದರು ಇಷ್ಟೊಂದು ಪ್ರೀತಿಸಲು ಸಾಧ್ಯವೆ ಎಂದುಕೊಂಡು ಅಂತ ಪ್ರೀತಿ ಪಡೆದ ನಾನೆ ಧನ್ಯಳೆಂದು ಬೀಗುತ್ತಿದ್ದೆ. ಆದರೆ ಅಂದು ಸುಖವಾಗಿ ಬೆಳೆದ ನನಗೆ ನಿನ್ನ ಬಡತನದ ಜೀವನ ಕಷ್ಟವಾದೀತು, ನಿನ್ನ ತಂದೆ ತಾಯಿಯನ್ನ ನಾನು ಪ್ರೀತಿಸಲು ಸಾದ್ಯವಿಲ್ಲ ಎಂದೆಲ್ಲ ಹೇಳಿ ನನ್ನ ತಿರಸ್ಕರಿಸಿದಾಗ ನಿನ್ನೆದುರು ನಾನು ಅತ್ತಾಗ ನನ್ನ ಕಣ್ಣಿಂದ ಹರಿದದು ಕಣ್ಣೀರಲ್ಲವೆ?

ಆದರೆ ನೀನು ಅಂದುಕೊಂಡಂತೆ ನಾನಿಂದು ಒಂಟಿಯಲ್ಲ.. ಮುದುಡಿದ ನನ್ನ ಮನ ಎಂದೂ ಅರಳದು ಅಂದುಕೊಂಡಿದ್ದೆ.. ಪ್ರೀತಿ ಹೇಗಾದರು ದಾರಿ ಹುಡುಕುತ್ತೆ.. ನನ್ನನ್ನು ಜೀವದಷ್ಟು ಪ್ರೀತಿಸುವವರೊಬ್ಬರು ನಾನ್ನ ಜೀವನದಲ್ಲೂ ಪ್ರವೇಶಿಸಿದ್ದಾರೆ.. ಅವರ ಪ್ರೀತಿ ನೊಡಿದಾಗಲೆ ಎನೊ, ನನಗೆ ನಿನ್ನ ಮೆಲಿದ್ದ ಪ್ರೀತಿಯ ಆಳ ಅರಿವಾಗಿದ್ದು.. ಬಹುಶಃ ಅದೇ ಅವ್ರ ಪ್ರೀತಿಯನ್ನೂ ಅರಿಯಲು ಸಾಧ್ಯವಾಗಿಸಿದ್ದು..


ಇಂದು ನಾನು ಒಂಟಿಯಲ್ಲ.. ನನ್ನ ಬಾಳ ಪುಟಗಳಲಿ ಸಹಿ ಮಾಡಿರೊ ಕೈಯೊಂದಿಗೆ, ನನ್ನ ಕೈ ಬೆಸೆದು, ಉರಿಯಂತೆ ಕಾಡುತಿದ್ದ ಸೂರ್ಯನ ಉದಯ ಹಿತ ವೆನಿಸುತ್ತಿದೆ.. "


3 comments: